thumb|ಆರ್ಮಡಿಲೊ
ಈಡೆಂಟೇಟ ವರ್ಗಕ್ಕೆ ಸೇರಿದ ಹೆಗ್ಗಣದಂತೆ ನೆಲಕೊರೆಯುವ ಒಂದು ಜಾತಿಯ ಪ್ರಾಣಿ. ಈ ಜಾತಿಯ ಪ್ರಾಣಿಗಳೆಲ್ಲ ಅಮೆರಿಕದ ನಿವಾಸಿಗಳು. ಇವುಗಳ ಹಲವಾರು ಮೂಳೆಚಕ್ಕೆಗಳು ಹೆಚ್ಚು ಕಡಿಮೆ ಮೈಯನ್ನೆಲ್ಲ ಪುರ್ಣವಾಗಿ ಮುಚ್ಚುವ ಕವಚದಂತಿವೆ. ಹೆಗಲಿನಲ್ಲಿ ಒಂದು ಮೂಳೆಯ ಗುರಾಣಿ ಇದೆ. ಸೊಂಟದಲ್ಲಿ ಮತ್ತೊಂದಿದೆ. ಇವುಗಳ ನಡುವೆ ಚಲಿಸುವಂಥ ಹಲವಾರು ಮೂಳೆಯ ಒಡ್ಯಾಣ ಅಥವಾ ಚುಕ್ಕೆಗಳು ಇದ್ದು ಮೈಬಾಗಿ ಬಳುಕಲು ಸಾಕಷ್ಟು ಅವಕಾಶವಿದೆ. ತಲೆಯಮೇಲೆ ಮತ್ತೊಂದು ಮೂಳೆಯ ಗುರಾಣಿ ಇದೆ. ಬಾಲದುದ್ದಕ್ಕೂ ಚಿಕ್ಕ ಮೂಳೆಗಳಿವೆ. ಇವನ್ನು ಬಿಟ್ಟರೆ ಚರ್ಮದಮೇಲೆ ಮೂಳೆಗಳಿರುವ ಪ್ರಾಣಿಗಳು ಇನ್ನಾವುವೂ ಇಲ್ಲ. ಇವುಗಳ ಹೆಸರು ಮೂಳೆಪಟ್ಟಿಗಳ ಲೆಕ್ಕವನ್ನವಲಂಬಿಸಿದೆ. ಉದಾಹರಣೆಗೆ, ಮೂರು ಪಟ್ಟೆ, ಆರು ಪಟ್ಟೆ, ಒಂಬತ್ತುಪಟ್ಟೆ ಇತ್ಯಾದಿ. ಹೊರ ಕವಚ ಬಹಳ ಬಲವಾಗಿರುವುದಲ್ಲದೆ ಅದರೊಳಕ್ಕೆ ಪ್ರಾಣಿ ತನ್ನ ತಲೆಯನ್ನೂ ಬಾಲವನ್ನೂ ಎಳೆದುಕೊಂಡು ಒಂದು ದುರ್ಭೇದ್ಯವಾದ ಚೆಂಡಿನಂತೆ ಗುಂಡಾಗಿ ಉರುಳುತ್ತಿರಬಲ್ಲದು. 

ಇದು ಸ್ಲಾತ್ ಎಂಬ ಪ್ರಾಣಿಯ ಗುಂಪಿಗೆ ಸೇರಿದೆ. ಸ್ಲಾತ್ ಪ್ರಾಣಿಯು ಮರದ ರೆಂಬೆಗಳನ್ನು ಆಶ್ರಯಿಸಿದರೆ ಇದು ತನ್ನ ಕವಚವನ್ನೂ ತೋಡುವ ಸಾಮಥರ್್ಯವನ್ನು ಅವಲಂಬಿಸಿ ನೆಲವನ್ನು ಆಶ್ರಯಿಸಿದೆ. ಇದಕ್ಕೆ ಒಳ್ಳೆಯ ಬಲವಾದ ಉಗುರುಗಳಿರುವುದರಿಂದ ನೆಲವನ್ನು ಬೇಗನೆ ತೋಡಿ ನೆಟ್ಟನೆ ಒಳಕ್ಕಿಳಿದು ಕಣ್ಮರೆಯಾಗಬಲ್ಲದು. ಕವಚದ ರಕ್ಷಣೆಯ ಜೊತೆಗೆ ಇದು ವೇಗವಾಗಿ ಓಡಲೂಬಲ್ಲದು; ಚುರುಗುಟ್ಟುವಂತೆ ಕಡಿಯಲೂ ಬಲ್ಲದು. ಸಾಮಾನ್ಯವಾಗಿ ಇದು ದುಷ್ಟ ಜಂತುವಲ್ಲ. ಬೆದೆಗಾಲದಲ್ಲಿ ಹೊರತು, ಮಿಕ್ಕ ಸಮಯಗಳಲ್ಲಿ ಒಂಟಿಯಾಗಿಯೇ ಇರುತ್ತದೆ. ತಗ್ಗು ಏರು ಇಲ್ಲದ ಬಯಲು ಕಾಡುಗಳಲ್ಲೂ ನೆಲಗಳಲ್ಲೂ ಇರಲು ಇದಕ್ಕೆ ಇಷ್ಟ. ಇರುವೆ, ಹುಳು ಹುಪ್ಪಟೆ, ಸಸ್ಯ, ಕೊಳೆತ ಮಾಂಸ ಇವು ಇದರ ಆಹಾರ. ನಸುಹಳಸಿದ ಮಾಂಸವೆಂದರೆ ಇದಕ್ಕೆ ತುಂಬ ಪ್ರೀತಿ. ಕೆಲವು ಆರ್ಮಡಿಲೊಗಳು ಹಾವುಗಳನ್ನು ತಿನ್ನುತ್ತವೆ. ಒಟ್ಟಿನಲ್ಲಿ ಆರ್ಮಡಿಲೊ ತಿನ್ನದ ವಸ್ತುವಿಲ್ಲ ಎನ್ನಬಹುದು. ಇವು ರಾತ್ರಿಯಲ್ಲಿ ತಮ್ಮ ಗೂಡುಗಳಿಂದ ಹೊರಬಿದ್ದು ಹುಳು ಹುಪ್ಪಟೆ, ಸಣ್ಣದಂಶಕ ಪ್ರಾಣಿಗಳು ಮತ್ತು ಸತ್ತ ಪ್ರಾಣಿಗಳನ್ನು ಹುಡುಕಿಕೊಂಡು ಹೊರಡುತ್ತವೆ. ತಲೆಯಿಂದ ಬಾಲದ ಕೊನೆಯವರೆಗೆ ಐದು ಅಡಿಗಳಷ್ಟಿರುವ ರಾಕ್ಷಸ ಆರ್ಮಡಿಲೊ ಈ ಜಾತಿಯಲ್ಲಿ ಅತ್ಯಂತ ದೊಡ್ಡ ಪ್ರಾಣಿ. ಒಂಬತ್ತು ಪಟ್ಟೆಗಳುಳ್ಳ ಆರ್ಮಡಿಲೊ ಒಂದೇ ದಕ್ಷಿಣ ಟೆಕ್ಸಾಸ್, ಆರಿಜೋ಼ನ, ಅಲ್ಲಿಂದ ದಕ್ಷಿಣಕ್ಕೆ ಬ್ರೆಜಿಲ್ವರೆಗೂ ಆರ್ಜಂಟೀನದ ಬಯಲು ಕಾಡಿನಿಂದ ಹಿಡಿದು ಪನಾಮಾದವರೆಗೂ ದಕ್ಷಿಣ ಅಮೆರಿಕದ ಎಲ್ಲೆಡೆಯಲ್ಲೂ ಹರಡಿದೆ. ಮನುಷ್ಯರ ಕೈಗೆ ಸಿಕ್ಕು ಬಾಳಬೇಕಾಗಿ ಬಂದಾಗ ಇವುಗಳಲ್ಲಿ ಅನೇಕವು ಕೊಚ್ಚಿದ ಮಾಂಸ, ಕೋಳಿ ಮೊಟ್ಟೆ, ಅನ್ನ ತಿಂದು ಬದುಕಬಲ್ಲವು.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ